12ನೆಯ ಶತಮಾನದ ವಚನಕಾರ್ತಿ. ವಚನಕಾರ ಹಡಪದ ಅಪ್ಪಣ್ಣನ ಪತ್ನಿ. ಈಕೆಯ ಜೀವನದ ವಿವರಗಳೇನೂ ಸಿಕ್ಕಿಲ್ಲವಾದರೂ ಈಕೆಯ ವಚನಗಳಿಂದ ಸ್ಥೂಲವಾಗಿ ಇವಳ ಜೀವನರೇಖೆಗಳನ್ನು ಗುರುತಿಸಬಹುದು.

ಲಿಂಗಮ್ಮ ಬಡತನದಲ್ಲಿ ಹುಟ್ಟಿ ಚಿಕ್ಕಂದಿನಿಂದ ಕಷ್ಟವನ್ನು ಅನುಭವಿಸಿ ದವಳು. ಆದರೂ ಶಿವನ ಮೇಲಿದ್ದ ಭಕ್ತಿ ಕಡಮೆಯಾಗಲಿಲ್ಲ; ದಿನೇ ದಿನೇ ವೃದ್ಧಿಸುತ್ತಲೇ ಇತ್ತು. ಪ್ರಾಪ್ತ ವಯಸ್ಕಳಾದ ಮೇಲೆ ಶಿವಭಕ್ತನಿ ಗಿಂತ ಹೆಚ್ಚಾಗಿ ಬಸವಭಕ್ತನಾಗಿದ್ದ ಹಡಪದ ಅಪ್ಪಣ್ಣನಿಗೆ ಕೊಟ್ಟು ವಿವಾಹ ವಾಯಿತು. ಲಿಂಗಮ್ಮನ ಪಾಲಿಗೆ ಶಿವನೇ ಅಪ್ಪಣ್ಣ, ಅಪ್ಪಣ್ಣನೇ ಶಿವ.  ಪತಿಯ ಸಹವಾಸದಿಂದ ಲಿಂಗಮ್ಮನ ಭಕ್ತಿ, ಜ್ಞಾನ ಮತ್ತೂ ಹೆಚ್ಚಿದವು.  ಶಿವಭಕ್ತರ ಸೇವೆ, ದಾಸೋಹಗಳೇ ಇವರ ಪರಮಪ್ರಿಯ ಕಾಯಕಗಳಾದವು. ಪತಿಯ ಮಾತೇ ವೇದವಾಕ್ಯವಾಯಿತು. ಹೀಗೇ ಇರಲು ಅಂಗಲಿಂಗವೆಂಬ ಭೇದ ಅಳಿಯುವಷ್ಟು ದೊಡ್ಡವಳಾದಳು. ಕಡೆಗೆ ಒಂದು ದಿವಸ ಶಿವನಲ್ಲೇ ಐಕ್ಯಳಾದಳು.

ಚೆನ್ನಮಲ್ಲೇಶ್ವರ ಇವಳ ಗುರು. ಅಪ್ಪಣ್ಣಪ್ರಿಯ ಚೆನ್ನಬಸವಣ್ಣ ಎಂಬುದು ಇವಳ ವಚನಗಳ ಅಂಕಿತ. ಇದುವರೆಗೆ ಇವಳ 113 ವಚನಗಳು ದೊರಕಿವೆ.  ಒಂದು ವಚನದಲ್ಲಿ ತಾನು ಚೆನ್ನಬಸವಣ್ಣನ ಕರುಣದ ಶಿಶು ಎಂದು ಹೇಳಿಕೊಂಡಿದ್ದಾಳೆ.  ಕೈಲಾಸ-ಮತ್ರ್ಯವೆಂಬ ಭೇದ ಲಿಂಗಮ್ಮನಿಗೆ ಒಪ್ಪಿಗೆಯಿಲ್ಲ.  ನಿಜವಾದ ಶರಣರು ಯಾರೆಂಬುದಕ್ಕೆ ಆಸೆಯನಳಿದು, ರೋಷವ ನಿಲಿಸಿ, ಜಗದ ಪಾಶವ ಹರಿದು, ಈಶ್ವರನೆನಿಸಿಕೊಂಬವರು ಶರಣರು; ತನುವ ಕರಗಿಸಿ, ಹರಿವ ಮನವ ನಿಲ್ಲಿಸಿ, ಅಂಗಗುಣವನೆ ಅಳಿದು, ಲಿಂಗ ಗುಣವನೆ ನಿಲಿಸಿ, ಭಾವವಳಿದು ಭವಕೆ ಸವಿದವರು ಶರಣರು ಎಂದು ನುಡಿದಿದ್ದಾಳೆ.  ಘನವ ಕಾಂಬುದಕ್ಕೆ ಮನವೆಂತಿರಬೇಕೆಂದು ಕೇಳಿದರೆ ಮನನಿರ್ಮಳವಾದಲ್ಲದೆ ಘನವ ಕಾಣಬಾರದು ಎಂದು ಒಂದೇ ಮಾತಿನಲ್ಲಿ ಉತ್ತರ ಕೊಡುತ್ತಾಳೆ.  ನೋಡಿಹೆನೆಂದರೆ ನೋಟವಿಲ್ಲ . . . . ನೆನೆದಿಹೆನೆಂದರೆ ಮನವಿಲ್ಲ, ಇಂತು ನೆನಹು ನಿಷ್ಪತ್ತಿಯಾಗಿ ಶರಣರ ಪಾದದಲ್ಲಿಯೆ ಬೆರೆದು ಸುಖಿಯಾದೆನಯ್ಯಾ, ತೊಟ್ಟು, ಬಿಟ್ಟು ಬಟ್ಟಬಯಲೊಳಗೆ ಬಿದ್ದು ನಾನೆತ್ತ ಹೋದೆನೆಂದರಿಯೆನಯ್ಯ, ಅಂಗಲಿಂಗವೆಂಬ ಉಭಯವಳಿಯಿತ್ತು ಸಂಗಸುಖ ಹಿಂಗಿತ್ತು ಮಂಗಳದ ಮಹಾಬೆಳಗಿನಲ್ಲಿ ಓಲಾಡಿ ಸುಖಿಯಾದೆ ನಯ್ಯ ಎಂಬ ವಚನ ಇವಳ ಅನುಭಾವಸಂಪತ್ತಿಗೆ ಸಾಕ್ಷಿಯಾಗಿದೆ.  ಇವಳ ಅನುಪಮ ವ್ಯಕ್ತಿತ್ವ ಇವಳ ವಚನಗಳಲ್ಲಿ ಉಜ್ಜ್ವಲವಾಗಿ ಪ್ರತಿಬಿಂಬಿತವಾಗಿದೆ.	

(ಕೆ.ವೈ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ